 ತಾಮ್ಸನ್, ಜಾರ್ಜ್ ಪೆಗೆಟ್	
	1892-1975. ಇಂಗ್ಲಿಷ್ ಭೌತವಿಜ್ಞಾನಿ ಸರ್ ಜೆ. ಜೆ. ತಾಮ್ಸನ್‍ನ (ನೋಡಿ- ತಾಮ್ಸನ್,-ಜೋಸೆಫ್-ಜಾನ್) ಏಕೈಕ ಪುತ್ರ. ಜಾರ್ಜ್ ತಾಮ್ಸನ್ ಶಾಲೆ ಮತ್ತು ಕಾಲೇಜು ವಿದ್ಯಾಭ್ಯಾಸವೆಲ್ಲವನ್ನೂ ಕೇಂಬ್ರಿಜಿನಲ್ಲಿಯೇ ಮುಗಿಸಿ ಅಲ್ಲಿಯೇ ಭೌತಶಾಸ್ತ್ರ ಪ್ರಾಧ್ಯಾಪಕನಾಗಿದ್ದ ತನ್ನ ತಂದೆಯ ಬಳಿ ಸಂಶೋಧನೆಯಲ್ಲಿ ತೊಡಗಿದರು. ಸುಮಾರು ಅದೇ ವೇಳೆ ಮೊದಲನೆಯ ಮಹಾಯುದ್ಧ ಪ್ರಾರಂಭವಾದ ಕಾರಣ ಇವರು 1914ರಲ್ಲಿ ಅಧ್ಯಯನವನ್ನು ತಾತ್ಕಾಲಿಕವಾಗಿ ನಿಲ್ಲಿಸಿ ನಾಡಿನ ಯುದ್ಧ ಸೇವಾಕಾರ್ಯದಲ್ಲಿ ನಿರತರಾಗಬೇಕಾಯಿತು. ಯುದ್ಧಾನಂತರ ಮೂರು ವರ್ಷಗಳ ಕಾಲ ಕೇಂಬ್ರಿಜಿನ ಕ್ರಿಸ್ಟಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದು ಸಂಶೋಧನೆಯನ್ನು ಮುಂದುವರಿಸಿದರು. ಅನಂತರ ಸ್ಕಾಟ್‍ಲೆಂಡಿನ ಅಬರ್ಡಿನ್ ವಿಶ್ವವಿದ್ಯಾಲಯದಲ್ಲಿ ಸುಮಾರು ಎಂಟು ವರ್ಷಗಳ ಕಾಲ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ಮುಂದೆ 1930- ರಿಂದ 1952ರ ವರೆಗೆ ಲಂಡನ್ ವಿಶ್ವವಿದ್ಯಾಲಯದ ಇಂಪಿರಿಯಲ್ ಕಾಲೇಜಿನಲ್ಲಿಯೂ 1952 ರಿಂದ 1962ವರೆಗೆ ಕೇಂಬ್ರಿಜಿನ ಕ್ರಿಸ್ಟಿ ಕಾಲೇಜಿನಲ್ಲಿಯೂ ಪ್ರಾಧ್ಯಾಪಕರಾಗಿದ್ದು ಉತ್ತಮ ಬೋಧಕ ಮತ್ತು ಸಂಶೋಧಕರೆಂದು ಕೀರ್ತಿಗಳಿಸಿ 1962ರಲ್ಲಿ ನಿವೃತ್ತಿ ಹೊಂದಿದರು. 

	ಜಾರ್ಜ್ ತಾಮ್ಸನ್ ಬ್ರಿಟನ್ನಿನ ಅನೇಕ ವಿಜ್ಞಾನ ಸಮಿತಿಗಳಲ್ಲಿದ್ದು ಬ್ರಿಟಿಷ್ ಸರ್ಕಾರಕ್ಕೆ ಉತ್ತಮ ಸಲಹೆಗಾರರಾದ್ದರು. ಪರಮಾಣು ಬಾಂಬು ಸೃಷ್ಟಿಯ ಸಾಧ್ಯಾಸಾಧ್ಯತೆಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಬ್ರಿಟಿಷ್ ಸರ್ಕಾರ 1941ರಲ್ಲಿ ನಿಯೋಜಿಸಿದ ಒಂದು ಸಮಿತಿಗೆ ಇವರು ಅಧ್ಯಕ್ಷರಾಗಿದ್ದು. ಪರಮಾಣು ಬಾಂಬು ಸೃಷ್ಟಿಸುವುದು ಸಾಧ್ಯವೆಂದು ಅನುಮೋದಿಸಿದರು. 

	ಅಬರ್ಡಿನ್ ವಿಶ್ವವಿದ್ಯಾಲಯದಲ್ಲಿ ಜಾರ್ಜ್ ತಾಮ್ಸನ್ ಎಲೆಕ್ಟ್ರಾನ್ ವಿವರ್ತನೆ (ಡಿಫ್ರ್ಯಾಕ್ಷನ್) ಎಂಬ ಅತ್ಯಂತ ಮುಖ್ಯ ಸಂಶೋಧನೆಯನ್ನು ನಡೆಸಿದರು. ನಿರ್ದಿಷ್ಟ ವೇಗದಿಂದ ಚಲಿಸುವ ಎಲೆಕ್ಟ್ರಾನಿಗಳನ್ನು ಅತಿ ತೆಳುವಾದ ಚಿನ್ನದ ರೇಕುಗಳ ಮೇಲೆ ಹಾಯಬಿಟ್ಟು ಅವು ಚಿನ್ನದ ಪರಮಾಣುಗಳಿಂದ ಚಿಮ್ಮಿದ ರೀತಿಯ ಬಗ್ಗೆ ಕೂಲಂಕಷವಾಗಿ ಅಭ್ಯಸಿಸಿದರು. ಎಲೆಕ್ಟ್ರಾನುಗಳಲ್ಲಿ ಕಣಗಳಿಗೆ ಇರಬೇಕಾದ ಗುಣಗಳಷ್ಟೇ ಅಲ್ಲದೆ ಅಲೆಗಳ ಗುಣ ವಿಶೇಷಗಳೂ ಇವೆ ಎಂಬುದಾಗಿ ಇವರು ಮೊದಲ ಬಾರಿಗೆ ತೋರಿಸಿಕೊಟ್ಟರು. ಈ ಪ್ರಯೋಗಗಳಿಂದ ಡಿಬ್ರಾಗ್ಲೀಯವರ ದ್ರವ್ಯ ಅಲೆವಾದವನ್ನು (1923) ಪ್ರಾಯೋಗಿಕವಾಗಿ ಸಮರ್ಥಿಸಲು ಸಾಧ್ಯವಾಯಿತು. ಇದೇ ಕಾಲದಲ್ಲಿ ಅಮೆರಿಕದ ಭೌತವಿಜ್ಞಾನಿ ಸಿ.ಜೆ.ಡೇವಿಸನ್ ಕೂಡ ಇದೇ ನಿರ್ಧಾರವನ್ನು ಮತ್ತೊಂದು ರೀತಿಯ ಪ್ರಯೋಗಗಳಿಂದ ಸಮರ್ಥಿಸಿದ್ದರು. ಈ ಸಂಶೋಧನೆಗಳಿಗಾಗಿ ಜಾರ್ಜ್ ತಾಮ್ಸನ್ ಮತ್ತು ಸಿ.ಜೆ.ಡೇವಿಸನ್‍ರವರಿಗೆ 1937ರ ಭೌತಶಾಸ್ತ್ರ ನೊಬೆಲ್ ಪಾರಿತೋಷಿಕವನ್ನು ನೀಡಲಾಯಿತು.

	ಎಲೆಕ್ಟ್ರಾನ್ ಸಂಶೋಧನೆ ಭೌತಶಾಸ್ತ್ರದ ಬೆಳೆವಣಿಗೆಗೆ ವಿಶೇಷ ರೀತಿಯಲ್ಲಿ ಕಾರಣವಾಗಿದೆ; ಮತ್ತು ಅನೇಕ ರೀತಿಯಲ್ಲಿ ಅದು ಪ್ರಾಯೋಗಿಕವಾಗಿಯೂ ಉಪಯುಕ್ತವಾಗಿದೆ. ಎಲೆಕ್ಟ್ರಾನ್ ಸೂಕ್ಷ್ಮದರ್ಶಕದ ನಿರ್ಮಾಣ ಕಾರ್ಯ ಈ ಸಂಶೋಧನೆಯ ನೆರವಿನಿಂದಲೇ ಸಾಧ್ಯವಾದುದು. ಹಾಗೂ ಈ ಎಲೆಕ್ಟ್ರಾನ್ ವಿವರ್ತನೆ ಪ್ರಯೋಗಗಳಿಂದ ಘನವಸ್ತುಗಳ ಮೇಲ್ಮೈ ರಚನಾಕ್ರಮವನ್ನು ಸೂಕ್ಷ್ಮದರ್ಶಕ ಮಟ್ಟದಲ್ಲಿ ಅಧ್ಯಯನ ಮಾಡಲು ಸಾಧ್ಯವಾಗಿದೆ.

	ಆ್ಯನೋಡ್ ಕಿರಣಗಳು ಮತ್ತು ಧಾತುವಿನ ಐಸೊಟೋಪುಗಳು ಇವುಗಳಿಗೆ ಸಂಬಂಧಿಸಿದಂತೆ ತಾಮ್ಸನ್ ಕೆಲವು ಸಂಶೋಧನೆಗಳನ್ನು ನಡೆಸಿದ್ದಾರೆ. ಆ್ಯನೋಡ್‍ಕಿರಣಗಳ ಉತ್ಪತ್ತಿ ಕ್ರಮದಲ್ಲಿ ಕೆಲವು ಸುಧಾರಣೆಗಳನ್ನು ಸಾಧಿಸಿರುವರು. ಇವರು ಲಿಥಿಯಮ್ ಧಾತುವಿಗೆ 6 ಮತ್ತು 7 ಪರಮಾಣು ತೂಕವುಳ್ಳ ಎರಡು ಸಮಸ್ಥಾನಿಗಳಿವೆ ಎಂದು ಮೊದಲ ಬಾರಿಗೆ ತೋರಿಸಿಕೊಟ್ಟರು. ಲಂಡನ್ ವಿಶ್ವವಿದ್ಯಾಲಯದ ಇಂಪೀರಿಯಲ್ ಕಾಲೇಜಿನಲ್ಲಿದ್ದಾಗ ಇವರು ನ್ಯೂಕ್ಲಿಯರ್ ವಿದಳನ ಕ್ರಿಯೆಯ ಮೂಲಕ ಪರಮಾಣು ಶಕ್ತಿಯನ್ನು ಬಿಡುಗಡೆ ಮಾಡುವ ಬಗ್ಗೆ ಕೆಲವು ಸಂಶೋಧನೆಗಳನ್ನು ನಡೆಸಿದರು ಹಾಗೂ ಡ್ಯೂಟೇರಿಯಮ್‍ನಿಂದ ಪರಮಾಣು ಶಕ್ತಿಯನ್ನು ಹೊರತೆಗೆಯುವ ಬಗ್ಗೆ ಸ್ವಲ್ಪ ಸಂಶೋಧನೆಯನ್ನು ನಡೆಸಿದರು.

	ಜಾರ್ಜ್ ತಾಮ್ಸನ್ ರಾಯಲ್ ಸೊಸೈಟಿಯ ಫೆಲೊ ಆಗಿದ್ದರು. ಇವರು ಆ ಸೊಸೈಟಿಯ ರಾಯಲ್ ಮೆಡಲ್ ಮತ್ತು ಹ್ಯೂಗ್ಸ್ ಮೆಡಲ್‍ಗಳನ್ನು ಪಡೆದಿರುವರು, ಬ್ರಿಟನ್ನಿನ ಅನೇಕ ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಿ ಸನ್ಮಾನಿಸಿವೆ. ಇವರು ಕೆಲವು ಪಠ್ಯ ಪುಸ್ತಕಗಳಿಗೆ ಕರ್ತೃವಾಗಿರುವರಲ್ಲದೆ ಶ್ರೀಸಾಮಾನ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಪರಮಾಣು ಮತ್ತು ನಿರೀಕ್ಷಿತ ಭವಿಷ್ಯ ಮತ್ತು ವಿಜ್ಞಾನದಿಂದ ಸ್ಫೂರ್ತಿ ಎಂಬ ಎರಡು ಗ್ರಂಥಗಳನ್ನು (ಇಂಗ್ಲಿಷ್ ಭಾಷೆಯಲ್ಲಿ) ರಚಿಸಿದ್ದಾರೆ.														(ಎನ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ